ಖ್ಯಾತ ಕತೆಗಾರ ಯಶವಂತ ಚಿತ್ತಾಲರ ಮೊದಲ ಕಾದಂಬರಿ 'ಮೂರು ದಾರಿಗಳು'. ಈ ಕಾದಂಬರಿಯು ಮುಖ್ಯವಾಗಿ ಒಂದು ಪ್ರದೇಶದ ಅನುಭವವನ್ನು ಕಟ್ಟಿಕೊಡುತ್ತದೆ. ಹೀಗಾಗಿ ಇದನ್ನು ಪ್ರಾದೇಶಿಕ ಕಾದಂಬರಿ ಎಂದು ಕರೆಯಲಡ್ಡಿಯಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಜನಜೀವನವನ್ನು ಚಿತ್ರಿಸುವ ಪ್ರಥಮ ಕಾದಂಬರಿ. ಈ ಮೊದಲು ವಿ.ಜಿ. ಭಟ್ಟ, ವಿ.ಜಿ. ಶಾನಭಾಗ ಹಾಗೂ ಯಶವಂತರ ಕತೆಗಳಲ್ಲಿ ಉತ್ತರ ಕನ್ನಡದ ಜೀವನ ದಾಖಲಾಗಿದೆ. ಆದರೆ, ಮೂರುದಾರಿಗಳು ಕಾದಂಬರಿಯಲ್ಲಿ ಅದು ಕಾದಂಬರಿಯಂತಹ ವಿಸ್ತೃತ ಸಾಹಿತ್ಯ ಪ್ರಕಾರ ಸೇರಿದ್ದು ಬಹುಶಃ ಇದೇ ಮೊದಲು. 'ಮೂರು ದಾರಿಗಳು' ಕಾದಂಬರಿಯಲ್ಲಿಯ ಪ್ರಾದೇಶಿಕತೆಯ ವೈಶಿಷ್ಟವು ಕೇವಲ ಹಿನ್ನೆಲೆಯಾಗಿ ಮಾತ್ರ ಬರುವುದಿಲ್ಲ. ಅದು ಕತೆಯ ಭಾಗವಾಗಿಯೇ ಬರುತ್ತದೆ. ಈ ಕಾದಂಬರಿಯ ಬಹುತೇಕ ಪಾತ್ರಗಳು ಕರಾವಳಿ ಪ್ರದೇಶದ ಅಲ್ಲಿಯ ಸಮಾಜಕ್ಕೆ ನಿಕಟವಾಗಿ ಸಂಬಂಧಿಸಿದವುಗಳು. ಜೀವನದೊಡಲಿನಿಂದ ಅವರ ವ್ಯಕ್ತಿತ್ವ ರೂಪುಗೊಂಡಿದೆ. ಹಾಗೂ ಆ ಕಕ್ಷೆಯಲ್ಲಿಯೇ ಅವರ ವೈಯಕ್ತಿಕ ಜೀವನ ನಡೆಯುತ್ತದೆ.