ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ 'ಸಾರ್ಥ' ಕಾದಂಬರಿಯು ಭಾರತದಲ್ಲಿ ನಡೆದ ಧರ್ಮಗಳ ತಿಕ್ಕಾಟದ ಕುರಿತ ಕಾದಂಬರಿ. ಸಾರ್ಥ ಒಂದು ಹಳೆಯ ಪದವಾಗಿದ್ದು, ಸರಕು ಸಾಮಾನುಗಳನ್ನು ಹೊತ್ತು ಸಾಗಿಸುವ ಜನಗಳ ಗುಂಪು ಮತ್ತು ಜನಗಳ ಪ್ರಯಾಣವನ್ನು ಸೂಚಿಸುತ್ತದೆ. ಈ ಕಾದಂಬರಿಯು ಕ್ರಿಸ್ತ ಶಕ ೮ನೇ ಶತಮಾನದಲ್ಲಿ ಭಾರತದಲ್ಲಿ ಆದ ರಾಜಕೀಯ, ಧಾರ್ಮಿಕ, ಮತ್ತು ಆಧ್ಯಾತ್ಮಿಕ ಸಂಗತಿಗಳ ಆಧಾರದಮೇಲೆ ರಚಿತವಾಗಿದೆ.ಐತಿಹಾಸಿಕ ವ್ಯಕ್ತಿಗಳಾದ ಆದಿ ಶಂಕರಾಚಾರ್ಯ, ಮಂಡನ ಮಿಶ್ರ, ಉಭಯ ಭಾರತಿ, ಕುಮಾರಿಲ ಭಟ್ಟರನ್ನು, ಮತ್ತು ಹಳೆಯ ನಳಂದ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡಿದೆ. ವೈದಿಕ ಸಂಪ್ರದಾಯದಲ್ಲಿ ಜನಿಸಿದ ನಾಗಭಟ್ಟನು ಭಾರತದ ವಿವಿಧ ಪ್ರದೇಶಗಳಲ್ಲಿ ಸಂಚರಿಸುವದು ಕಥೆಯ ಒಂದು ಮುಖವಾದರೆ, ಇನ್ನೊಂದು ಮುಖ ಅವನ ಆಧ್ಯಾತ್ಮಿಕ ಅಂತರ್ಯಾತ್ರೆ. ಹೀಗೆ ಎಂಟನೇ ಶತಮಾನದ ಐತಿಹಾಸಿಕ ಕಥಾವಸ್ತುವನ್ನು ಹೊಂದಿರುವ 'ಸಾರ್ಥ' ಒಂದು ವಿಶಿಷ್ಟ ಕೃತಿಯಾಗಿದೆ. ನಾಗಭಟ್ಟನು ಸಾಂಪ್ರದಾಯಿಕ ಹಿನ್ನಲೆಯಿಂದ ಬಂದವನಾದರೂ ಇತರ ಧಾರ್ಮಿಕ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಆಸಕ್ತಿಯುಳ್ಳವನು; ವಿಚಿತ್ರವೆನಿಸುವ ವಿಧಿವಿಧಾನಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ನೈತಿಕ ಮತ್ತು ಆಧ್ಯಾತ್ಮಿಕವಾಗಿ ಸಾಹಸೀ ಮನೋಭಾವವುಳ್ಳವನು. ಸೆಳೆದು ಓದಿಸಿಕೊಂಡು ಹೋಗುವ ಕಥಾನಿರೂಪಣೆ, ಪುರಾವೆಗಳನ್ನು ಆಧರಿಸಿದ ಚಾರಿತ್ರಿಕ ಸಂಗತಿ ಮತ್ತು ವ್ಯಕ್ತಿಗಳನ್ನು ಆಧರಿಸಿರುವ ಕಥಾವಸ್ತು ಈ ಕಾದಂಬರಿಯ ವೈಶಿಷ್ಟ್ಯ. ದೇಶ-ಕಾಲಗಳ ಮಿತಿಯನ್ನು ಮೀರಿದ 'ಸನಾತನ ಭಾರತ'ವೆಂಬ ಆನುಭಾವಿಕ ಸತ್ಯವನ್ನು ಕಾದಂಬರಿ ಪ್ರಕಾರದ ಸಾಹಿತ್ಯದಲ್ಲಿ ವಿಶಿಷ್ಟರೀತಿಯಲ್ಲಿ ನಿರೂಪಿಸಲಾಗಿದೆ.
Skönlitteratur och litteratur